ಅನೇಕ ಸಲ ಒಂದು ಕಲಾಕೃತಿಯ ಮಹತ್ವ ತನ್ನಿಂದ ತಾನೇ ಎದ್ದು ಕಾಣದೆ, ಅದರ ವಿಮರ್ಶೆ/ವಿಶ್ಲೇಷಣೆಯಿಂದ ಹೊರಬರುತ್ತದೆ. ಹಾಗೆಯೇ, ಸಾಕಷ್ಟು ಸಲ ರೂಪಾಂತರ/ಅಳವಡಿಕೆಗಳೂ ಕಲಾಕೃತಿಗಳ ಮಹತ್ವವನ್ನು ಹೆಚ್ಚಿಸುತ್ತವೆ. ಸಾಧಾರಣ ಕೃತಿಗಳನ್ನೂ ಉತ್ತಮ ವ್ಯಾಖ್ಯಾನ ಅಥವಾ ಅಳವಡಿಕೆಗಳ ಮೂಲಕ ಮಹತ್ವದ್ದೆಂದು ತೋರುವಂತೆ ಮಾಡಬಹುದು. ಅನೇಕ ಉದಾಹರಣೆಗಳನ್ನು ಕೊಡಬಹುದು, ಆದರೆ ತಕ್ಷಣಕ್ಕೆ ನನ್ನ ಮನಸ್ಸಿಗೆ ಬರುತ್ತಿರುವುದು ಕೊಪ್ಪೋಲಾನ ಗಾಡ್‍ಫ಼ಾದರ್ ಸಿನೆಮಾ. ಮಾರಿಯೋ ಪುಝೋನ ಸಾಧಾರಣ ಕಾದಂಬರಿಯನ್ನು ತೊಗೊಂಡು (ನಾನು ಅದನ್ನು ಓದಿಲ್ಲ, ಕೇಳಿ ಗೊತ್ತಷ್ಟೆ) ಒಂದು ಪ್ರಬಲ ಸಿನೆಮಾವನ್ನು ಕೊಪ್ಪೋಲಾ ತಯಾರಿಸಿದ. ವ್ಯತಿರಿಕ್ತ ಉದಾಹರಣೆಗಳೂ ಸಾಕಷ್ಟು ಇವೆ. ಆದರೆ ಸದ್ಯಕ್ಕೆ ಅವುಗಳ ಅವಶ್ಯಕತೆಯಿಲ್ಲ.
ಇಷ್ಟೆಲ್ಲ ದೊಡ್ಡ ದೊಡ್ಡ ಫಾಲ್ತೂ ಮಾತುಗಳನ್ನು ಯಾಕೆ ಆಡಿದೆ ಎಂದರೆ… ಕೆಳಗಿನ ಪೇಂಟಿಂಗ್ ನೋಡಿ. ಅಂಥ ವಿಶೇಷ ಪೇಂಟಿಂಗ್ ಏನಲ್ಲ. ಟಾಯಮ್‍ಪಾಸ್ ಆಗದಿದ್ದಾಗ ಎಸ್ ತನ್ನ ಲ್ಯಾಪ್‍ಟಾಪಿನಲ್ಲಿ ಇಂಥವನ್ನು ಮಾಡುತ್ತಿರುತ್ತಾಳೆ.
ಹೀಗೇ ಏನೋ ಮಾಡುತ್ತಿದ್ದಾಗ ಇದು ಕಾಣಿಸಿತು. ನಾನೆಂದುಕೊಂಡೆ – ಪರವಾಗಿಲ್ಲ. ಏನೋ ಸ್ವಲ್ಪ ಅರ್ಥಪೂರ್ಣವಾಗಿದೆ. (ವ್ಯವಸ್ಥೆಯ/ಸಂಪ್ರದಾಯಗಳ) ಗೋಡೆಗಳ ನಡುವೆ ಬಂಧಿಯಾಗಿರುವ ಹುಡುಗಿ. ತನ್ನ ನರ್ತನದ ಮೂಲಕ, ತನ್ನ ವಿಶೇಷವಾದ ಪ್ರತಿಭೆಯ ಶಕ್ತಿಯಿಂದ, ಗೋಡೆಗಳಿಂದ ಹೊರಬರುತ್ತಿದ್ದಾಳೆ. ಅವಳ ನರ್ತನದ ಭಂಗಿಯೊಂದರಿಂದ ಅದೇ ಆಕಾರದಲ್ಲಿ ಗೋಡೆ ಬಿರುಕು ಬಿಟ್ಟಿದೆ. ಬಹಳ ಮಾಡಿ, ಅವಳು ಈ ಕಟ್ಟಳೆಗಳನ್ನು ತೊಡೆದು ಹೊರಬರುತ್ತಾಳೆ. ಅಥವಾ, ಹೀಗೂ ವ್ಯಾಖ್ಯಾನಿಸಬಹುದೇ? ಅವಳ ಪ್ರಯತ್ನದಿಂದ ಗೋಡೆ ಬಿರುಕು ಬಿಟ್ಟಿದೆ ನಿಜ. ಆದರೆ ಅದು ಅವಳಿಗೆ ಕೊಟ್ಟಿರುವ ಅವಕಾಶ ಅಲ್ಪ. ಇಷ್ಟೆಲ್ಲ ಹೋರ್‍ಆಟದ ನಂತರವೂ. ಅಂದರೆ, ಅವಳು ಪೂರ್ತಿಯಾಗಿ ಹೊರಬರಲು ಎಂದೂ ಸಾಧ್ಯವೇ ಇಲ್ಲವೆ?
ಈವತ್ತು ಎಸ್ ತಾನು ತೆಗೆದ ಚಿತ್ರಗಳನ್ನು ತೋರಿಸುತ್ತಿದ್ದಳು. ಮೇಲಿನದು ಬಂದ ಕೂಡಲೆ ನಾನು, ’ಹಾಂ, ಇದು ಪರವಾಗಿಲ್ಲ. ಏನೋ ಸ್ವಲ್ಪ ಅರ್ಥಪೂರ್ಣವಾಗಿದೆ.’ ಎಂದೆ. ಅವಳಿಗೆ ಕೇಳಿಸಿತೋ ಇಲ್ಲವೋ, ’ಈ ಚಿತ್ರ ಸರಿಯಾಗಿ ಬಂದಿಲ್ಲ. ಮೈಕ್ರೊಸಾಫ್ಟ್ ಪೇಂಟ್‍ನಲ್ಲಿ ಏನೋ ಬಗ್ ಇದೆ.’ ಎಂದಳು. ನಾನು ಅದೇನು ಬಗ್ ಅದು ಎಂದು ಕೇಳಿದೆ. ಅದಕ್ಕೆ ಅವಳು, ’ಏನೋ ಗೊತ್ತಿಲ್ಲ. ಫಿಲ್ ಕಲರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅದಕ್ಕೆ ಹೀಗೆ ಎತ್ತಕೆತ್ತರೆ ಫಿಲ್ ಆಗಿದೆ.’ ಎಂದಳು. ಅಂದರೆ ನಾನು ವ್ಯಾಖ್ಯಾನಿಸಿದ ಗೋಡೆ, ಬಂಧನ, ಮಹಿಳಾ ವಿಮುಕ್ತಿ, ಇವೆಲ್ಲವೂ ಅವ್ಯಾವುವೂ ಅಲ್ಲದೆ ಕೇವಲ ಸಾಫ್ಟ್ವೇರಿನ ಒಂದು ಅಮಾಯಕ ದೋಷವಾಗಿತ್ತು! ಆದರೂ ನಾನು ಬಿಡದೆ ನನ್ನ ಪಾಂಡಿತ್ಯ ಪ್ರದರ್ಶಿಸಿದೆ. ಅದಕ್ಕೆ ಅವಳೆಂದಳು, ’ನಾನು ಹೀಗೆಲ್ಲ ಯೋಚಿಸಿಯೇ ಇರಲಿಲ್ಲ. ಆದರೆ ಇನ್ನು ಮುಂದೆ ಒಂದು ಕೆಲಸ ಮಾಡ್ತೀನಿ. ನಾನು ತೆಗೆದ ಚಿತ್ರಗಳನ್ನು ಇಂಟರ್‌ಪ್ರೆಟ್ ಮಾಡುವಂತೆ ನಿನಗೆ ಹೇಳುತ್ತೇನೆ!’
ಚಿತ್ರ ನಿಜ್ವಾಗ್ಲೂ ಚೆನ್ನಾಗಿದೆ. ನಿನ್ನ ಇಂಟರ್ ಪ್ರಿಟೇಶನ್ನೂ…
ಲೇಖನದ ವಸ್ತು ಮತ್ತೂ ಮಜವಾಗಿದೆ.
ಚಿತ್ರಕ್ಕಿಂತ ಅರ್ಥಗ್ರಹಣವೇ ಚೆನ್ನಾಗಿದೆ.
ಒಂದು ಸತ್ಯವನ್ನ ಅನೇಕ ಕೋನಗಳಿಂದ ಅನೇಕ ರೀತಿ ಅರ್ಥೈಸಿಕೊಳ್ಳಬಹುದು ಅನ್ನೋದಕ್ಕೆ ಸಾಕ್ಷಿ.
🙂 !!!
Different people, different views 🙂